ಕ್ಯೂಲಿಸಿಡೀ
ಕೀಟವರ್ಗದ ಡಿಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಸೊಳ್ಳೆಗಳು ಈ ಕುಟುಂಬದವು. ಕೆಲವು ಕೀಟಶಾಸ್ತ್ರಜ್ಞರು ಮಿಡ್ಜ್ ಮತ್ತು ನಾಟ್‍ಗಳನ್ನೂ ಈ ಕುಟುಂಬಕ್ಕೆ ಸೇರಿಸುತ್ತಾರೆ. ಚಿಕ್ಕಗಾತ್ರದ ಸೂಕ್ಷ್ಮವಾದ ಸುಲಭವಾಗಿ ಮುರಿಯುವಂಥ ದೇಹ, ಉದ್ದವಾದ ಕಾಲುಗಳು, ಕೂದಲು ಮತ್ತು ಹುರುಪೆಗಳಿಂದ ಆವೃತವಾದ ದೇಹ ಹಾಗೂ ಉಪಾಂಗಗಳು ಸೊಳ್ಳೆಗಳ ಕೆಲವು ವಿಶೇಷ ಲಕ್ಷಣಗಳು. ದೇಹದ ಬಣ್ಣ ಕಂದು, ಕಪ್ಪು, ಬೂದು ಇತ್ಯಾದಿಯಾಗಿದ್ದು ಅಲ್ಲಲ್ಲಿ ಬಿಳೆಯ ಚುಕ್ಕೆಗಳಿಂದ ಕೂಡಿ ಆಕರ್ಷಕವಾಗಿದೆ. ತಲೆ ಚಿಕ್ಕದು. ಕತ್ತು ಬಲುಸೂಕ್ಷ್ಮ. ವದನಾಂಗಗಳು ಆತಿಥೇಯ ಪ್ರಾಣಿಯ ದೇಹವನ್ನು ಚುಚ್ಚಲು ಅನುಕೂಲವಾಗಿವೆ. ಉದ್ದನೆಯ ಸೊಂಡಿಲೊಂದಿದೆ. ಕುಡಿಮೀಸೆಗಳು ಉದ್ದವಾಗಿದ್ದು ತಂತಿಯ ಹಾಗಿವೆ; ಇವುಗಳ ಮೇಲೆ 14-15 ಸಂದಿಗಳಿದ್ದು ಒಂದೊಂದು ಸಂದಿಯಲ್ಲೂ ವರ್ತುಲಾಕಾರವಾಗಿ ಜೋಡಿಸಲ್ಪಟ್ಟ ಹಲವಾರು ಕೂದಲುಗಳಿವೆ. ಗಂಡುಸೊಳ್ಳೆಗಳಲ್ಲಿ ಕೂದಲುಗಳು ಒತ್ತಾಗಿದ್ದು ಕುಡಿಮೀಸೆ ಪುಕ್ಕವನ್ನು ಹೋಲುತ್ತದೆ. ರೆಕ್ಕೆಗಳು ಉದ್ದ ಹಾಗೂ ತೆಳು. ಇವುಗಳ ಹಿಂತುದಿಯ ಅಂಚಿನ ಮೇಲೆಲ್ಲ ಕೂದಲುಗಳೂ ಹುರುಪೆಗಳೂ ಇವೆ. ರೆಕ್ಕೆಗಳಲ್ಲಿ ಪ್ರಮುಖವಾದ 6 ನಾಳಗಳನ್ನೂ ಕಾಣಬಹುದು. ನಾಳಗಳ ಮೇಲೂ ಹುರುಪೆಗಳಿವೆ. ಉದರ ಭಾಗದಲ್ಲಿ 10 ಖಂಡಗಳಿವೆ; ಕೊನೆಯ 3 ಖಂಡಗಳು ಜನನಾಂಗಗಳನ್ನೊಳಗೊಂಡಿವೆ. ಇವು ಹಲವಾರು ರೀತಿಯಲ್ಲಿ ಮಾರ್ಪಾಡಾಗಿವೆ.

ಸೊಳ್ಳೆಗಳ ಡಿಂಬಗಳು ಜಲವಾಸಿಗಳು. ಸ್ವತಂತ್ರ ಜೀವನ ನಡೆಸುತ್ತವೆ. ಇವನ್ನು ದಪ್ಪತಲೆ ಮತ್ತು ಹೊಟ್ಟೆಯ 8ನೆಯ ಖಂಡದ ಮೇಲ್ಭಾಗದಲ್ಲಿರುವ ಒಂದು ಜೊತೆ ಸ್ಪೈರಕಲ್ಲುಗಳಿಂದ ಗುರುತಿಸಬಹುದು. ಡಿಂಬದ ರಚನೆಯ ಗುಣಗಳು ಸೊಳ್ಳೆಯ ವರ್ಗೀಕರಣದಲ್ಲಿ ಬಹಳ ಮುಖ್ಯವಾದವು.

ಸೊಳ್ಳೆಗಳಲ್ಲಿ ಸುಮಾರು 2,400 ಪ್ರಭೇದಗಳಿವೆ. ಇವು ಸಾಧಾರಣವಾಗಿ ಎಲ್ಲ ದೇಶಗಳಲ್ಲಿಯೂ ಕಾಣಬರುತ್ತವೆ. ಹಿಮಾಲಯದಲ್ಲಿ 14,000' ಎತ್ತರದಲ್ಲಿಯೂ ಕೋಲಾರದ ಚಿನ್ನದ ಗಣಿಗಳಲ್ಲಿ ಭೂಮಟ್ಟದಿಂದ 3,760' ಕೆಳಗೂ ಕಾಣಬಂದಿವೆ. ಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿರುವುವಾದರೂ ಉತ್ತರ ಮೇರು ಪ್ರದೇಶಗಳಲ್ಲಿಯೂ ಇಲ್ಲದಿಲ್ಲ.

ಕ್ಯೂಲಿಸಿಡೀ ಕುಟುಂಬವನ್ನು 3 ಉಪಕುಟುಂಬಗಳನ್ನಾಗಿ ವಿಂಗಡಿಸಬಹುದು.

1 ಉಪಕುಟುಂಬ ಟೋಕ್ಸೊರಿಂಕೈಟಿನೀ (ಮೆಗರೈನಿನೀ): ಈ ಸೊಳ್ಳೆಗಳ ಸೊಂಡಿಲಿನ ಕೆಳ ಅರ್ಧಭಾಗ ಗಟ್ಟಿಯಾಗಿಯೂ ಮೇಲಿನ ಭಾಗ ಮೆದುವಾಗಿಯೂ ಇರುತ್ತದೆ. ಇವುಗಳ ಡಿಂಬಗಳು ಮಾಂಸಾಹಾರಿಗಳು. ಪ್ರೌಢ ಸೊಳ್ಳೆಗಳು ಹೂಗಳನ್ನು ತಿನ್ನುತ್ತವೆ. ಉದಾಹರಣೆಗೆ-ಟೋಕ್ಸೊರಿಂಕೈಟಿಸ್.

2 ಉಪಕುಟುಂಬ ಕ್ಯೂಲಿಸಿನೀ: ಈ ಸೊಳ್ಳೆಗಳ ಸೊಂಡಿಲು ಗಟ್ಟಿಯಾಗಿಲ್ಲ. ಪಾಲ್ಪಿಯ ಉದ್ದ ಸೊಂಡಿಲಿನ ಉದ್ದದ ಅರ್ಧಕ್ಕಿಂತ ಕಡಿಮೆ. ಸ್ಕುಟೆಲಂ ಮೂರು ಭಾಗವಾಗಿದೆ. ಹೆಣ್ಣುಸೊಳ್ಳೆಗಳು ರಕ್ತ ಹೀರುತ್ತವೆ. ಉದಾಹರಣೆಗೆ-ಕ್ಯೂಲೆಕ್ಸ್ ಸೊಳ್ಳೆ, (ನೋಡಿ- ಕ್ಯೂಲೆಕ್ಸ್-ಸೊಳ್ಳೆ) ಈಡೆಸ್.

3 ಉಪಕುಟುಂಬ ಅನಾಫಿಲಿನೀ: ಇವುಗಳಲ್ಲಿ ಪಾಲ್ಪಿಗಳು ಸೊಂಡಿಲಿನಷ್ಟೇ ಉದ್ದವಾಗಿರುತ್ತವೆ. ಸ್ಕುಟೆಲಂ ಗುಂಡಗೆ ಪಟಲರಹಿತವಾಗಿದೆ. ಹೆಣ್ಣು ಸೊಳ್ಳೆಗಳು ರಕ್ತ ಹೀರಿಜೀವಿಸುತ್ತವೆ. ಉದಾಹರಣೆಗೆ-ಅನಾಫಿಲಿಸ್. 

ಸೊಳ್ಳೆಗಳ ಜೀವನದಲ್ಲಿ ಮೊಟ್ಟೆ, ಡಿಂಬ, ಕೋಶಾವಸ್ಥೆ ಮತ್ತು ಪ್ರೌಢಾವಸ್ಥೆಗಳನ್ನು ಗುರುತಿಸಬಹುದು. ಡಿಂಬಗಳನ್ನು ರಿಗ್ಲರ್ಸ್ ಎಂದೂ ಕೋಶಾವಸ್ಥೆಯಲ್ಲಿರುವ ಮರಿಗಳನ್ನು ಟಂಬ್ಲರ್ಸ್ ಎಂದೂ ಕರೆಯಲಾಗುತ್ತದೆ. ಗಂಡುಸೊಳ್ಳೆಗಳ ವದನಾಂಗಗಳು ಚುಚ್ಚುವುದಕ್ಕೆ ಅನುಕೂಲವಾಗಿಲ್ಲ. ಆದ್ದರಿಂದ ಇವು ರಕ್ತವನ್ನು ಹೀರುವುದಿಲ್ಲ; ಹೂಗಳಲ್ಲಿನ ಮಕರಂದ sಮತ್ತು ಗಿಡಗಳ ರಸವನ್ನು ಹೀರಿ ಜೀವಿಸುತ್ತವೆ. ಹೆಣ್ಣುಸೊಳ್ಳೆಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು: ಮನುಷ್ಯನನ್ನು ಬಿಟ್ಟು ಮಿಕ್ಕೆಲ್ಲ ಪ್ರಾಣಿಗಳ ರಕ್ತವನ್ನು ಹೀರುವ ಜೂóಫಿಲಸ್ ಸೊಳ್ಳೆಗಳು ಮತ್ತು ಮನುಷ್ಯನ ರಕ್ತವನ್ನು ಹೀರುವ ಆಂತ್ರೋಫಿಲಸ್ ಸೊಳ್ಳೆಗಳು. ಗಂಡುಸೊಳ್ಳೆಗಳು ಸಾಮಾನ್ಯವಾಗಿ 6-7 ದಿವಸಗಳ ಕಾಲ ಜೀವಿಸುತ್ತವೆ. ಆದರೆ ಇವನ್ನು ಒಂದು ತಿಂಗಳ ವರೆಗೂ ಸಾಕಬಹುದು. ಹೆಣ್ಣುಸೊಳ್ಳೆಗಳಿಗೆ ಒಳ್ಳೆಯ ಆಹಾರ ದೊರತರೆ ಸುಮಾರು 4-5 ತಿಂಗಳವರೆಗೆ ಬದುಕಬಲ್ಲುವು. ಅತಿ ಚುರುಕು ಜೀವನ ನಡೆಸುವ ಹೆಣ್ಣುಸೊಳ್ಳೆಗಳ ಆಯುಸ್ಸು 30 ದಿವಸಗಳಿಗಿಂತ ಹೆಚ್ಚಿಲ್ಲ. ಬೇಸಗೆ ಕಾಲದಲ್ಲಿ ಇವುಗಳ ಆಯುಸ್ಸು ಎರಡು ವಾರಗಳ ವರೆಗೆ ಮಾತ್ರ ಎಂದು ಹೇಳಲಾಗಿದೆ.                 	  								(ಎನ್.ವಿ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ